ದೇವದೂತರು
ದೇವರ ಸೇವೆಯಲ್ಲಿದ್ದು ಅವನು ಅನುಜ್ಞೆಯಂತೆ ದುಷ್ಟ ನಿಗ್ರಹ ಪರಿಪಾಲನೆಗಳಲ್ಲಿ ತೊಡಗಿರುವ ದೂತರು (ಏಂಜಲ್ಸ್) ಇವರು ದಿವ್ಯ ಪುರುಷರು. ಯಹೂದಿ ಕ್ರೈಸ್ತ ಇಸ್ಲಾಂ ಮತ್ತು ಇತರ ಧರ್ಮಗಳಲ್ಲಿ ದೇವದೂತರು ಇರುವುದನ್ನು ಕಾಣಬಹುದು.

ಮನುಷ್ಯನಿಗೂ ದೇವರಿಗೂ ದೇವದೂತರು ಮಧ್ಯವರ್ತಿಗಳೆಂದು ಹಳೆಯ ಕಾಲದ ಧರ್ಮಗಳು ನಂಬುತ್ತವೆ. ದೇವರಿಂದ ಸೃಷ್ಟಿಸಲ್ಪಟ್ಟ ಇವರು ಮನುಷ್ಯರಿಗಿಂತ ಉತ್ತಮರು ಅದರೆ ದೇವರಿಗಿಂತ ಕಡಿಮೆಯವರು. ದೇವರಿಗೂ ಮಾನವರಿಗೂ ನಡುವೆ ಮೂರು ಅಂತರಗಳಿವೆ ಎಂದು ಕೆಲವು ಗ್ರಂಥಗಳಲ್ಲಿದೆ. ಮಾನವರಿಗೆ ಸನ್ನಿಹಿತರಾದ ದಿವ್ಯಪುರುಷರಲ್ಲಿ ಪ್ರಿನ್ಸಿಪ್ಯಾಲಿಟೀಸ್, ಆರ್ಕೇಂಜಲ್ಸ್, ಏಂಜಲ್ಸ್ ಎಂಬ ಮೂರು ಭೇದಗಳಿವೆ.

ಹೀಬ್ರೂ ಸಾಹಿತ್ಯದಲ್ಲಿ ಪವಿತ್ರರಾದ ಈ ದೇವದೂತರು ದೇವರ ಮಕ್ಕಳು, ದೇವರದೂತರು ಆಗಿದ್ದರು. ಡೇನ್ಯಲ್ ಎಂಬ ಗ್ರಂಥದ ರಚನೆಯಾದ ತರುವಾಯ ಮೈಕೇಲ್, ಗೇಬ್ರಿಯಲ್ ಮುಂತಾದವರನ್ನು ದೇವದೂತರೆಂದು ಕರೆಯಲಾಗಿದೆ. ಅವರವರ ಪ್ರಾಮುಖ್ಯಕ್ಕೆ ತಕ್ಕಂತೆ ದೇವದೂತರನ್ನು ವಿಭಾಗಿಸುವ ಕ್ರಮ ಒಂದು ಕಾಲದಲ್ಲಿತ್ತು. ಛೆರುಬಿಮ್, ಸ್ಕ್ರಾಫಿಮ್, ಅರೆಲಿಮ್ ಮುಂತಾದ ಹೆಸರುಗಳಿವೆ ಈ ವಿಭಾಗಗಳನ್ನು ಸೂಚಿಸುವಂಥವು. ಕ್ರಿ. ಪೂ. ಒಂದನೆಯ ಶತಮಾನದಿಂದ ಕ್ರಿ. ಶ. 6ನೆಯ ಶತಮಾನದವರೆಗಿನ ಅವಧಿಯಲ್ಲಿ ದೇವದೂತರು ಸೃಷ್ಟಿಯಾದರು.

ಅತ್ಯಂತ ಹಳೆಯಕಾಲದ ಕ್ರೈಸ್ತಧರ್ಮ ದಿವ್ಯಪುರುಷನ ಸ್ವಭಾವದ ಬಗೆಗೆ ಏನೂ ಹೇಳುವುದಿಲ್ಲ. ಅದರೆ ಅವರ ಅಸ್ತಿತ್ವವನ್ನು ಒಪ್ಪಿಕೊಂಡಿದೆ. ಮನುಷ್ಯನ ಮೋಕ್ಷಕ್ಕಾಗಿ ದುಡಿಯುವ ಭಗವಂತನ ದೂತರೆಂದು ಇವರನ್ನು ಬಣ್ಣಿಸಲಾಗಿದೆ. 

ಹಳೆಯಕಾಲದ ಕ್ರೈಸ್ತಲೇಖಕರಲ್ಲಿ ಒಬ್ಬನಾದ ಆತೇನಾಗೊರಸ್ ದಿವ್ಯಪುರುಷರು ಅವರಿಗಾಗಿ ನಿಯಮಿಸಿದ ಸ್ಥಳಗಳಲ್ಲಿ ದೇವರ ಆಜ್ಞೆಗಳನ್ನು ಜಾರಿಗೆ ತರುವರೆಂದು ಹೇಳಿದ್ದಾನೆ. ಗ್ರೀಕ್ ರಚನೆಗಳಲ್ಲಿ ದೇವದೂತರ ಬಗೆಗೆ ಅನೇಕ ಉಲ್ಲೇಖಗಳಿವೆ. ಬೇಸಿಲ್ ಎಂಬಾತ ದೇವದೂತರು ಪಾಪಗಳನ್ನು ಮಾಡುವುದು ಬಹಳ ಕಡಿಮೆ ಎಂದು ಹೇಳಿದ್ದಾನೆ. ಗ್ರೆಗರಿ ಎಂಬ ಗ್ರೀಕ್ ಲೇಖಕ ಪ್ರತಿಯೊಬ್ಬ ಮನುಷ್ಯನಿಗೂ ಸನ್ನಿಹಿತವಾಗಿ ಒಬ್ಬ ಒಳ್ಳೆಯ ದೇವದೂತನೂ ಒಬ್ಬ ಕೆಟ್ಟ ದೇವದೂತನೂ ಇರುತ್ತಾರೆಂದು ಹೇಳಿದ್ದಾನೆ. 

ಅಗಸ್ಟಿನ್ ಹೇಳಿರುವ ದೇವದೂತರು ಕಣ್ಣಿಗೆ ಕಾಣಿಸದವರು. ವಿವೇಕಿಗಳು, ಚಿರಂಜೀವಿಗಳು. ದೇವರ ಮಕ್ಕಳಿಗೂ ದಿವ್ಯಪುರುಷರಿಗೂ ಭೇದವುಂಟು. ಸಜ್ಜನರಾದ ದೇವದೂತರು ದೇವರ ಅಭಿಪ್ರಾಯವನ್ನು ಮಾನವರಿಗೆ ತಿಳಿಸುತ್ತಾರೆ. ಮಾನವರ ಪ್ರಾರ್ತನೆಗಳನ್ನು ದೇವರಿಗೆ ತಲುಪಿಸುತ್ತಾರೆ. ಮಾನವರನ್ನು ಪ್ರೀತಿಸುತ್ತಾರೆ ಮತ್ತು ಮಾನವರಿಗೆ ಸಹಾಯಮಾಡುತ್ತಾರೆ.
									       (ಆರ್.ವಿ. ಎಸ್. ಎಸ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ